Saturday, December 20, 2014

ನೆನಪಿನಾಳದಿಂದ ೨೪: ಚಟ್ನಿ ಭೂತ!


ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ.  ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ, ನನ್ನಷ್ಟಕ್ಕೆ ನಾನೇ ಆ ಸ್ವಾರಸ್ಯಕರ ಘಟನೆಯನ್ನು ನೆನೆದು ನಗುತ್ತಿದ್ದರೆ ಪಕ್ಕದಲ್ಲಿರುವವರು ನನಗೇನಾದರೂ ಹುಚ್ಚು ಹಿಡಿಯಿತೇ ಅಥವಾ ಯಾವುದಾದರೂ ಮೋಹಿನಿ ಕಾಟ ಇರಬಹುದೇ ಎಂದು ಅಚ್ಚರಿಯಿಂದ ನನ್ನ ಮುಖವನ್ನೇ ನೋಡುವಂಥ ಸನ್ನಿವೇಶಗಳು ಸಾಕಷ್ಟು ಬಾರಿ ಸೃಷ್ಟಿಯಾಗಿವೆ.  ಈ ದಿನವೂ ಹಾಗೇ ಆಯಿತು.  ಬಿಸಿ ಬಿಸಿ ದೋಸೆ ಪುದೀನಾ ಚಟ್ನಿ ಮಾಡಿ ಆ ಸ್ವರ್ಗಸುಖವನ್ನು ಅನುಭವಿಸುತ್ತಿದ್ದರೆ ಇದ್ದಕ್ಕಿದ್ದಂತೆ ವರ್ಷಗಳ ಹಿಂದೆ ಮೈಸೂರಿನ ದಸರಾ ವಸ್ತು ಪ್ರದರ್ಶನದಲ್ಲಿ ನಡೆದ ಚಟ್ನಿ ಪ್ರಸಂಗ ನೆನಪಾಗಿ ಇದ್ದಕ್ಕಿದ್ದಂತೆ ನಗಲಾರಂಭಿಸಿದೆ!  ಬೆಳಗಿನ ಉಪಾಹಾರಕ್ಕೆ ನನಗೆ ಕಂಪನಿ ಕೊಡಲು ಬಂದಿದ್ದ ನನ್ನ ಪಕ್ಕದ ಫ್ಲಾಟಿನ ಗೆಳೆಯ ಗಾಭರಿಯಾಗಿ, ಏನಾಯ್ತು,ಯಾಕೆ? ಅಂತೆಲ್ಲಾ ಪ್ರಶ್ನೆಗಳನ್ನು ಕೇಳಲಾರಂಭಿಸಿದ!  ನನ್ನ ನಗುವಿಗೆ ಕಾರಣವಾದ ಆ ಹಳೆಯ ಘಟನೆಯನ್ನು ಅವನಿಗೆ ವಿವರಿಸಿದಾಗ ಅವನೂ ಬಿದ್ದು ಬಿದ್ದು ನಗತೊಡಗಿದ!  J

ಕೆಲವು ವರ್ಷಗಳ ಹಿಂದೆ ನನ್ನಕ್ಕನ ಮಗಳು ಮೈಸೂರಿನ ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಳು, ಒಬ್ಬ ತಮ್ಮನೂ ಅಲ್ಲೇ ಇದ್ದ, ಅವರನ್ನೂ ನೋಡಿಕೊಂಡು, ನನ್ನ ಹುಟ್ಟೂರಿನ ದಸರಾ ವೈಭವವನ್ನು ನೋಡಿದಂತಾಗುತ್ತದೆಂದು ಸಕುಟುಂಬ ಸಮೇತ ಮೈಸೂರಿಗೆ ಹೋಗಿದ್ದೆವು.  ದಸರಾ ಉತ್ಸವವನ್ನೆಲ್ಲಾ ನೋಡಿದ ನಂತರ ಒಂದು ದಿನ ದಸರಾ ವಸ್ತು ಪ್ರದರ್ಶನವನ್ನು ನೋಡಲು ಹೊರಟೆವು, ಎಲ್ಲಾ ಕಡೆ ಸುತ್ತು ಹೊಡೆದು ಸಾಕಾಗಿ ಕೊನೆಗೆ ಹೊಟ್ಟೆಗೇನಾದರೂ ಹಾಕಿಕೊಳ್ಳೋಣವೆಂದು ಹುಡುಕುತ್ತಿರುವಾಗ " ಮಲ್ಲಿಗೆ ಇಡ್ಲಿ"ಯ ಹೋಟೆಲ್ ಕಣ್ಣಿಗೆ ಬಿತ್ತು!  ಖಾಲಿಯಾಗಿದ್ದ ಹೊಟ್ಟೆ ತುಂಬಿಸುವುದರ ಜೊತೆಗೆ ಆ ಚಟ್ನಿಯ ರುಚಿಯನ್ನು ನೆನೆದು ನನ್ನ ಬಾಯಲ್ಲಿ ನೀರು ಸುರಿಯಲಾರಂಬಿಸಿತು!  ನನ್ನ ಕಿರಿಯ ತಮ್ಮ ಗೋಪಿ ಆಗಲೇ ನನ್ನನ್ನು  ಛೇಡಿಸಲಾರಂಭಿಸಿದ್ದ,,,"ಅಣ್ಣಾ,,,,ಆ ಹೋಟೆಲ್ಲಿನವನು ಇವತ್ತು ಸತ್ತ"!!:-)  ಇದಕ್ಕೆ ಹಿನ್ನೆಲೆಯೇನೆಂದು ಹೇಳಿ ಬಿಡುತ್ತೇನೆ ಕೇಳಿ, ನಮ್ಮ ಮನೆಯಲ್ಲಿ ಇಡ್ಲಿ, ದೋಸೆ,ಅಕ್ಕಿ ರೊಟ್ಟಿ ಮಾಡಿದರೆ ನನಗೆ ಹೊಟ್ಟೆಯಲ್ಲಿ ವಿಶೇಷವಾಗಿ "ಎಕ್ಸ್ಟ್ರಾ ಪ್ಲೇಸ್" ಕ್ರಿಯೇಟ್ ಆಗಿಬಿಡುತ್ತಿತ್ತು!  ಒಂದು ಡಜನ್ ಇಡ್ಲಿ, ದೋಸೆ, ರೊಟ್ಟಿಯಾದರೆ ಅರ್ಧ ಡಜನ್ ಅನಾಯಾಸವಾಗಿ ಒಳ ಸೇರುತ್ತಿದ್ದವು!  ಅದು ಹೇಗಾದರೂ ಇರಲಿ, ಮನೆಯಲ್ಲಿ ಉಳಿದವರ್ಯಾರಿಗೂ ಚಟ್ನಿ ಮಾತ್ರ ಉಳಿಯುತ್ತಿರಲಿಲ್ಲ!   ಮಾಡಿದ ಚಟ್ನಿಯೆಲ್ಲಾ ನನಗೊಬ್ಬನಿಗೇ ಸರಿ ಹೋಗಿ ಬಿಡುತ್ತಿತ್ತು!! ಉಳಿದವರು ಬರೀ ದೋಸೆ, ಇಡ್ಲಿ ತಿನ್ನಬೇಕಾಗುತ್ತಿತ್ತು ಅಥವಾ ಸಕ್ಕರೆಯೊಂದಿಗೋ ಉಪ್ಪಿನಕಾಯಿಯೊಂದಿಗೋ ಇಲ್ಲಾ ರಾತ್ರಿಯ ಸಾರು ಉಳಿದಿದ್ದರೆ ಅದರೊಂದಿಗೋ ತಿನ್ನಬೇಕಾಗುತ್ತಿತ್ತು!  ಹೀಗಾಗಿ ಎಲ್ಲರೂ ನನಗೆ "ಚಟ್ನಿಭೂತ" ಎನ್ನುವ ಅನ್ವರ್ಥಕ ನಾಮವನ್ನಿಟ್ಟಿದ್ದರು.:-)  ಬೆಳಗಿನ ತಿಂಡಿಗೆ ಮನೆಯಲ್ಲಿ  ಎಲ್ಲರೂ  ನನಗಿಂತ ಮುಂಚೆ ತಿಂಡಿ ತಿನ್ನಲು ಪೈಪೋಟಿಯಲ್ಲಿರುತ್ತಿದ್ದರು, ತಡವಾದವರಿಗೆ ಅಪ್ಪಿ ತಪ್ಪಿಯೂ ಚಟ್ನಿ ಸಿಗುತ್ತಿರಲಿಲ್ಲ!  ಯಾವುದೇ ಹೋಟೆಲ್ಲಿಗೆ ಹೋದರೂ ಸರಿ, ಎಲ್ಲರೂ ತಿಂದು ಮುಗಿಸಿದರೂ ನಾನು ಮಾತ್ರ ಕನಿಷ್ಠ ಆರು ಬಾರಿ ಚಟ್ನಿ ತರಿಸಿಕೊಳ್ಳುತ್ತಿದ್ದೆ!  ತಿಪಟೂರಿನಲ್ಲಿ, ಹೊಳೆನರಸೀಪುರದಲ್ಲಿ, ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ನಾನು ದೋಸೆ ಅಥವಾ ಇಡ್ಲಿ ತಿನ್ನಲು ಹೋಗುತ್ತಿದ್ದ ಕೆಲವು ಹೋಟೆಲ್ಲುಗಳಲ್ಲಿ ನನ್ನ ಜೊತೆ ಜಗಳವಾಡದೆ ಇದ್ದ ಮಾಣಿಗಳೇ ಇರಲಿಲ್ಲ ಅಲ್ಲದೆ ನನ್ನನ್ನು ಕಂಡೊಡನೆ ಮಾಣಿಗಳು ನನಗೆ ಸಪ್ಲೈ ಮಾಡುವುದನ್ನು ತಪ್ಪಿಸಿಕೊಳ್ಳಲು ಏನಾದರೂ ಸಬೂಬು ಹೇಳಿ ಮಾಯವಾಗಿ ಬಿಡುತ್ತಿದ್ದರು!  ಇಂಥಾ ಕುಖ್ಯಾತಿಯಿದ್ದ ನನ್ನ ಕಣ್ಣಿಗೆ ಮೈಸೂರಿನ ದಸರಾ ವಸ್ತು ಪ್ರದರ್ಶನದ ಮೈದಾನದಲ್ಲಿ ಮಲ್ಲಿಗೆ ಇಡ್ಲಿಯ ಅಂಗಡಿಯ ಒಡೆಯ ಪರಮಶತ್ರುವಾದ ದಿನವದು!  J

ಏನಪ್ಪಾ,, ಏನು ನಿಮ್ಮ ಹೋಟೆಲ್ಲಿನ ಸ್ಪೆಷಲ್ ಅಂದ ನನ್ನನ್ನೊಮ್ಮೆ ಆತ್ಮೀಯತೆಯಿಂದ ನೋಡಿದ ತಳ್ಳುಗಾಡಿಯ ಒಡೆಯ ನನ್ನ ಜೊತೆಗಿದ್ದ ಹನ್ನೆರಡು ಮಂದಿಯನ್ನು ನೊಡಿ ಖುಷಿಯಾಗಿ ಒಳ್ಳೆಯ ವ್ಯಾಪಾರವಾಗುವ ಖುಷಿಯಲ್ಲಿ "ಮಲ್ಲಿಗೆ ಇಡ್ಲಿ, ದೋಸೆ, ಮೆಣಸಿನಕಾಯಿ ಬಜ್ಜಿ" ಅಂತೆಲ್ಲಾ ಪಟ್ಟಿ ಹೇಳತೊಡಗಿದ!  ಅದೆಲ್ಲಾ ಇರಲಿ, ನಿಮ್ಮ ಚಟ್ನಿ ಯಾವ ಥರದ್ದು ತೋರಿಸಿ ಅಂದವನಿಗೆ ದೊಡ್ಡ ಸ್ಟೀಲ್ ಬಕೆಟ್ಟಿನಲ್ಲಿದ್ದ "ಪುದೀನಾ ಚಟ್ನಿ"ಯನ್ನು ತೋರಿಸಿ "ನಂದು ಪೆಸಲ್ ಚಟ್ನಿ ಸಾ, ನೀವು ಒಂದ್ಸಲ ತಿಂದ್ರೆ ಮತ್ತೆ ಹುಡುಕ್ಕೊಂಡು ನಮ್ ಹೊಟ್ಲುಗೇ ಬರ್ತೀರಾ" ಅಂದ! ಸರಿ, ನಮ್ಮ ಗುಂಪಿನ ಕಡೆಗೆ ತಿರುಗಿ ಏನು ಬೇಕು ಅಂದೆ, ಎಲ್ರೂ ಮಲ್ಲಿಗೆ ಇಡ್ಲಿ, ಮೆಣಸಿನ ಕಾಯಿ ಬಜ್ಜಿ ಅಂದ್ರು!  ೧೩ ಪ್ಲೇಟ್ ಆರ್ಡರ್ ಮಾಡಿ ಮುಂದಿದ್ದ ಹುಲ್ಲು ಹಾಸಿನ ಮೇಲೆ ಕುಳಿತೆವು. ಮಾಣಿ ಖುಷಿಯಾಗಿ ತಟ್ಟೆಗಳನ್ನು ಹಿಡಿದು ತಂದ, ನನ್ನ ತಮ್ಮ ಗೋಪಿ ಮೊದಲು ಅಲ್ಲಿ ದೊಡ್ಡವರಿಗೆ ಕೊಡಪ್ಪಾ ಅಂದ!  ಮೊದಲನೆಯ ತಟ್ಟೆ ನನ್ನ ಕೈಗೆ ಬಂದಿತ್ತು, ಪುದೀನಾ ಚಟ್ನಿಯ ಘಮಲು ಆಗಲೇ ನನ್ನ ಜಿಹ್ವೆಯನ್ನು ಕೆರಳಿಸಿ ಸಿಕ್ಕಾಪಟ್ಟೆ ಚಟ್ನಿ ಸ್ವಾಹಾ ಮಾಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದೇ ಬಿಟ್ಟಿತ್ತು!  ಅವನು ಇನ್ನೂ ಎರಡು ತಟ್ಟೆಗಳನ್ನು ಕೊಟ್ಟಿರಲಿಲ್ಲ, ನಾನು ಮಾಣಿಯನ್ನು ಕೂಗಿದೆ, ಸ್ವಲ್ಪ ಚಟ್ನಿ ತೊಗೊಂಡ್ ಬಾರಪ್ಪಾ,  ಅವನು ಬಹಳ ಗೌರವದಿಂದ ಬಂದೆ ಸಾ ಅಂದು ಚಟ್ನಿ ತಂದು ಎರಡು ಚಮಚ ಹಾಕಿದ,,,ಇನ್ನೂ ಸ್ವಲ್ಪ ಹಾಕು ಅಂದೆ,  ಹಾಕಿದ!  ಅವನು ಮತ್ತೆ ಮೂವರಿಗೆ ತಟ್ಟೆ ಕೊಡುವಷ್ಟರಲ್ಲಿ ಮತ್ತೆ ನನ್ನ ಕೂಗು,, ಚಟ್ನಿ ತಾರಪ್ಪಾ,,,ತಂದು ಮತ್ತೆರಡು ಚಮಚ ಹಾಕಿ ಹೋದ,  ರುಚಿಯಾಗಿದ್ದ ಚಟ್ನಿಯನ್ನು ನಾನು ಬಹಳ ಕಡಿಮೆ ಇಡ್ಲಿಯ ಜೊತೆಗೆ ಚಪ್ಪರಿಸತೊಡಗಿದೆ! ಅವನು ಮತ್ತಿಬ್ಬರಿಗೆ ತಟ್ಟೆ ಕೊಡುವುದರಲ್ಲಿ ನಾನು ಮತ್ತೆ ಕೂಗಿದೆ, ಚಟ್ನಿ ತಾರಪ್ಪಾ,,,ಈ ಬಾರಿ ಆ ಹುಡುಗನಿಗೆ ಯಾಕೋ ನನ್ನ ಮೇಲೆ ಅನುಮಾನ ಬಂದಂತಿತ್ತು, ನಾನೇನು ಚಟ್ನಿ ತಿನ್ನುತ್ತಿದ್ದೆನೋ ಅಥವಾ ಕೆಳಗೆ ಚಲ್ಲಿ ಮತ್ತೆ ಮತ್ತೆ ಸುಮ್ಮನೆ ಕರೆಯುತ್ತಿದ್ದೀನೋ ಎಂದು!  ಬಂದು ಎರಡು ಚಮಚ ಚಟ್ನಿ ಹಾಕಿದವನು ಸೂಕ್ಷ್ಮವಾಗಿ ನನ್ನ ಸುತ್ತಲಿನ ಜಾಗವನ್ನು ಪರೀಕ್ಷಿಸಿದ, ಆದರೆ ಅಲ್ಲಿ ಒಂಚೂರೂ ಚಟ್ನಿ ಚೆಲ್ಲಿರಲಿಲ್ಲ!

ಇಷ್ಟೊತ್ತಿಗಾಗಲೇ ನನ್ನ ಕುಟುಂಬದವರೆಲ್ಲಾ ತಮ್ಮತಮ್ಮಲ್ಲೇ  ಮಾತಾಡುತ್ತಾ ಮುಸಿ ಮುಸಿ ನಗಲಾರಂಭಿಸಿದ್ದರು! ಮಾಣಿಗೋ ಬೇರೇಯವರಿಗೆ ಇಡ್ಲಿ ಮಾರುವ ಆತುರ,,ಆದರೆ ಅವನಿಗೆ  ನಮ್ಮ ಗುಂಪಿಗೆ ಚಟ್ನಿ ಸಪ್ಲೈ ಮಾಡುವುದರಲ್ಲಿಯೇ ತುಂಬಾ ಸಮಯ ಹೋಗುತ್ತಿತ್ತು! ಕೊನೆಯದಾಗಿ ಇಡ್ಲಿಯ ತಟ್ಟೆ ಸಿಕ್ಕಿದ್ದು ನನ್ನ ಮಗನಿಗೆ, ಅವನು ಜಾಸ್ತಿ ಚಟ್ನಿ ತಿನ್ನುತ್ತಿರಲಿಲ್ಲವಾಗಿ ಅವನಿಗೆ ಕೊನೆಯಲ್ಲಿ ಕೊಡುವಂತೆ ಹೇಳಿ ಉಳಿದವರೆಲ್ಲಾ ತಮಾಷೆ ನೋಡುತ್ತಾ ತಾವೂ ಸಹ ತಮ್ಮ ಕೈಲಿ,,ಅಲ್ಲಲ್ಲ,,,ಬಾಯಲ್ಲಾದಷ್ಟು ಹೆಚ್ಚು ಚಟ್ನಿ ತಿನ್ನಲು ಪ್ರಯತ್ನಿಸುತ್ತಿದ್ದರು!  ಎಲ್ಲರೂ ಒಂದು ಮಲ್ಲಿಗೆ ಇಡ್ಲಿ, ಜೊತೆಗೆ ಒಂದು ಮೆಣಸಿನಕಾಯಿ ಬೋಂಡಾ ತಿನ್ನುವಷ್ಟರಲ್ಲಿ ಸುಸ್ತಾಗಿದ್ದರು, ಪ್ರತಿಯೊಬ್ಬರೂ ೨-೩ ಬಾರಿ ಚಟ್ನಿ ಹಾಕಿಸಿಕೊಂಡಿದ್ದರು,,ಆದರೆ,,,,,,ನಾನು ಮಾತ್ರ ಮಗುಮ್ಮಾಗಿ ಅರ್ಧ ಡಜನ್ ಇಡ್ಲಿ ಜೊತೆಗೆ ಮೂರು ಮೆಣಸಿನಕಾಯಿ ಬಜ್ಜಿ ತಿಂದಿದ್ದೆ,,,,ಜೊತೆಗೆ ಏನಿಲ್ಲವೆಂದರೂ ೧೫ಕ್ಕಿಂತ ಹೆಚ್ಚು ಬಾರಿ ಚಟ್ನಿ,,,,ಚಟ್ನಿ ಎಂದು ಕೂಗಿ ಕರೆದು ಚಟ್ನಿ ಹಾಕಿಸಿಕೊಂಡಿದ್ದೆ!  ಸುಸ್ತಾದ ಮಾಣಿ ಕೊನೆಗೆ ಚಟ್ನಿಯ ಸ್ಟೀಲ್ ಬಕೆಟ್ಟನ್ನೇ ತಂದು ನನ್ನ ಪಕ್ಕದಲ್ಲಿಟ್ಟು ಬಿಟ್ಟಿದ್ದ!  ನಾನಂತೂ ನನಗೆ ಸಮಾಧಾನವಾಗುವಷ್ಟು,,,,ನನ್ನ ಜಿಹ್ವಾಚಾಪಲ್ಯ ತಣಿಯುವಷ್ಟು ಚಟ್ನಿಯನ್ನು ಗಡದ್ದಾಗಿ ಬಾರಿಸಿದ್ದೆ!  ಆ ಚಟ್ನಿಯ ಖಾರದ ಮಹಿಮೆಯೋ,,,,ಅಥವಾ ಸರಿಯಾಗಿ ಬಾರಿಸಿದ್ದ ಇಡ್ಲಿಗಳ ಮಹಿಮೆಯೋ ಅಥವಾ ಸುತ್ತಾಡಿ ಬಂದಿದ್ದ ಆಯಾಸವೋ,,,,,,,,ಅನಾಯಾಸವಾಗಿ ಅಲ್ಲೇ ನಿದ್ರೆಗೆ ಜಾರಿದ್ದೆ!  ಒಂದರ್ಧ ಘಂಟೆ ಒಳ್ಳೆಯ ನಿದ್ದೆಯ ನಂತರ ಎದ್ದು ನೋಡಿದರೆ ನಮ್ಮ ಕುಟುಂಬದವರೆಲ್ಲಾ ಅವರವರ ಮಾತುಕತೆಯಲ್ಲಿ ಮುಳುಗಿ ಹೋಗಿದ್ದರು!  ಎಷ್ಟಾಯ್ತಪ್ಪಾ ಬಿಲ್ಲು ಅಂದರೆ ನನ್ನನ್ನೊಮ್ಮೆ ಕೆಕ್ಕರಿಸಿ ನೋಡಿದ ಹೋಟೆಲ್ ಒಡೆಯ ಗದರುವ ಧ್ವನಿಯಲ್ಲಿ ಇನ್ನೂರೈವತ್ತು ಅಂದ!  ಹಣ ಕೊಡಲು ಹೋದಾಗ ನನಗೊಮ್ಮೆ ಕೈ ಮುಗಿದು “ಇನ್ನೊಂದ್ಸಲ ನಮ್ ಹೋಟ್ಲಿಗೆ ಮಾತ್ರ ಬರಬೇಡಿ ಸಾ,,ನಿಮ್ಮಂಥೋರು ನಾಕು ಜನ ಬಂದ್ರೆ ನಾನು ಬರ್ಬಾದಾಗೋದು ಗ್ಯಾರಂಟಿ” ಅಂದ!  ನನಗೆ ರಪ್ಪಂತ ಕೆನ್ನೆಗೆ ಹೊಡೆದಂತಾಗಿತ್ತು,, ಆದರೂ ಸಾವರಿಸಿಕೊಂಡು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಅಲ್ಲಿಂದ ಹೊರಟೆ!  ನನ್ನ ಹಿಂದೆ ನನ್ನ ಕುಟುಂಬದವರೆಲ್ಲಾ ಮುಸುಮುಸನೆ ನಗುತ್ತಿದ್ದರು. J J J

Monday, July 28, 2014

ಒಂದು ಅತ್ಯಾಚಾರದ ಸುತ್ತ!



ಅಂದು ನಮ್ಮ ಉದ್ಯಾನ ನಗರಿ ಬೆಂಗಳೂರು ತುಂಬ ಗರಮ್ಮಾಗಿತ್ತು!  ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಮೂರ್ತಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಘಟನೆ ಇಡೀ ಉದ್ಯಾನನಗರಿಯನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೆಲ್ಲಾ ಅದೇ ಸುದ್ಧಿ, ಇಡೀ ನಗರ ಒಕ್ಕೊರಲಿನಿಂದ ದಾರುಣ ಕೃತ್ಯವನ್ನೆಸಗಿದ್ದ ಕ್ಯಾಬ್ ಚಾಲಕ ಶಿವಕುಮಾರನ ವಿರುದ್ಧ ಧ್ವನಿಯೆತ್ತಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿತ್ತು.  ಆ ದಾರುಣ ಘಟನೆ ನಡೆದ ಕೆಲವೇ ದಿನಗಳಲ್ಲಿ ಅಂದಿನ ಪೋಲೀಸ್ ಕಮೀಷನರ್ ಆಗಿದ್ದ ಶ್ರೀ ಅಜಯ್ ಕುಮಾರ್ ಸಿಂಗ್ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಎಲ್ಲಾ ಕಾಲ್ ಸೆಂಟರ್, ಬಿಪಿಒ, ಸಾಫ್ಟ್ವೇರ್ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನಿರ್ವಾಹಕರುಗಳ ಸಭೆ ಕರೆದಿದ್ದರು.  ಹಲವು ಕಾಲ್ ಸೆಂಟರ್ ಹಾಗೂ ಬಿಪಿಒಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದ ಪ್ರಮುಖ ಭದ್ರತಾ ಸಂಸ್ಥೆಗಳನ್ನು ಆಹ್ವಾನಿಸಿದ್ದರು.  ನಮ್ಮ ಸಂಸ್ಥೆಯಿಂದ ನಾನೂ ಪಾಲ್ಗೊಂಡಿದ್ದೆ.  ಹಲವು ಸುತ್ತಿನ ವಿಚಾರ ವಿನಿಮಯದ ನಂತರ ಹೊಸ ನಿಯಮವೊಂದನ್ನು ರೂಪಿಸಲಾಯಿತು.  ಅದರಂತೆ ಎಲ್ಲಾ ಕಾಲ್ ಸೆಂಟರ್, ಬಿಪಿಒ, ಸಾಫ್ಟ್ವೇರ್ ಸಂಸ್ಥೆಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಭದ್ರತಾ ಅಂಗರಕ್ಷಕರನ್ನು ಒದಗಿಸಬೇಕು, ಮನೆಯಿಂದ ಕೆಲಸಕ್ಕೆ ಬರುವಾಗ, ಕೆಲಸದಿಂದ ಮನೆಗೆ ಹಿಂದಿರುಗುವಾಗ ಮನೆಬಾಗಿಲಿನವರೆಗೂ ಒಬ್ಬ ಭದ್ರತಾ ರಕ್ಷಕ ಜೊತೆಯಲ್ಲಿಯೇ ಹೋಗಿ ಬಿಟ್ಟು ಬರಬೇಕು ಎಂದು ಆದೇಶಿಸಲಾಯಿತು. 

ಬೆಂಗಳೂರಿನ ಭದ್ರತಾ ಸಂಸ್ಥೆಗಳ ಇತಿಹಾಸದಲ್ಲಿಯೇ ಇದೊಂದು ಅಪೂರ್ವ ಬೆಳವಣಿಗೆಗೆ ಕಾರಣವಾಯಿತು.  ಅದುವರೆವಿಗೂ ಕೇವಲ ಹವಾಯಿ ಚಪ್ಪಲಿ, ಖಾಕಿ ಬಟ್ಟೆ ತೊಟ್ಟು, ಬೀಡಿ ಸೇದುತ್ತಾ, ಗೇಟು ತೆಗಿ, ಗೇಟು ಮುಚ್ಚು ಎಂದಷ್ಟೆ ಸೀಮಿತವಾಗಿದ್ದ ಭದ್ರತಾರಕ್ಷಕರ ಪಾಲಿಗೆ ಈ ಘಟನೆ ಹೊಸ ಆಯಾಮವನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಹೊಸ ಹೊಸ ವಿನ್ಯಾಸದ ಸಮವಸ್ತ್ರಗಳಲ್ಲಿ ಸಧೃಡಕಾಯದ ಯುವಕರು ಈ ಕ್ಷೇತ್ರಕ್ಕೆ ಕಾಲಿಟ್ಟರು.  ಎಲ್ಲ ಭದ್ರತಾ ಕಂಪನಿಗಳು ತಮ್ಮ ನೇಮಕಾತಿ ವಿಧಾನಗಳನ್ನು  ಬದಲಿಸಿ ವಿದ್ಯಾವಂತ ಹಾಗೂ ಸಧೃಡರಾದ ಯುವಕರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳಲಾರಂಭಿಸಿದವು.  ಅತ್ಯಂತ ಕಡಿಮೆ ಸಂಬಳ ಸಿಗುತ್ತಿದ್ದ ಈ ಕೆಲಸದಲ್ಲಿಯೂ ಉತ್ತಮ ವೇತನ ಹಾಗೂ ಇತರೆ ಸೌಲಭ್ಯಗಳು ದೊರಕಲಾರಂಭಿಸಿದವು.  ಈ ಸಮಯದಲ್ಲಿ ನಮ್ಮ ಸಂಸ್ಥೆಗೆ ಒಂದು ಕಾಲ್ ಸೆಂಟರಿಗೆ ಭದ್ರತಾ ರಕ್ಷಕರನ್ನು ಒದಗಿಸುವ ದೊಡ್ಡ ಗುತ್ತಿಗೆಯೇ ಸಿಕ್ಕಿತ್ತು.  ಸಂಸ್ಥೆಯ ಮಾಲೀಕರು ಎಲ್ಲಾ ಜವಾಬ್ಧಾರಿಯನ್ನು ನನ್ನ ಹೆಗಲಿಗೇರಿಸಿ ತಾವು ನಿಶ್ಚಿಂತರಾಗಿದ್ದರು.  ನಾನು ಎಲ್ಲ ಕನ್ನಡ ಪತ್ರಿಕೆಗಳಲ್ಲಿಯೂ ಭದ್ರತಾ ರಕ್ಷಕರ ನೇಮಕಾತಿಗಾಗಿ ಒಂದು ಜಾಹಿರಾತು ನೀಡಿದೆ, "ಕನ್ನಡಿಗರಿಗೆ ಮೊದಲ ಆದ್ಯತೆ " ಎನ್ನುವ ತಲೆಬರಹದಡಿಯಲ್ಲಿ  ನಾನು ಕೊಟ್ಟಿದ್ದ ಜಾಹೀರಾತಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತ್ತು.  ದೂರದ ಬಿಜಾಪುರ, ಗುಲ್ಬರ್ಗ, ಬೀದರ್, ರಾಯಚೂರುಗಳಿಂದಲೂ ಪ್ರತಿದಿನಾ ನನ್ನ ಮೊಬೈಲಿಗೆ ಕರೆಗಳು ಬರುತ್ತಿದ್ದವು. ಅಷ್ಟೋ ಇಷ್ಟೋ ವಿದ್ಯೆ ಕಲಿತು ಮಾಡಲು ಕೆಲಸವೂ ಇಲ್ಲದೆ, ಸರಿಯಾದ ಮಳೆ ಬೆಳೆಯೂ ಇಲ್ಲದೆ ಅತಂತ್ರರಾಗಿ ಕುಳಿತಿದ್ದ ಅದೆಷ್ಟೋ ಗ್ರಾಮೀಣ ಯುವಕರಿಗೆ ಈ ಪ್ರಸಂಗ ಬಹಳಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿತ್ತು. ತಮ್ಮ ಊರನ್ನು ಬಿಟ್ಟು ಬೇರೆ ಜಗತ್ತನ್ನೇ ನೋಡಿರದ ಮುಗ್ಧ ಯುವಕರು ಕೇಳುತ್ತಿದ್ದ ಪ್ರಶ್ನೆಗಳು ನಿಜಕ್ಕೂ ನನ್ನಲ್ಲಿ ಸೋಜಿಗವನ್ನುಂಟು ಮಾಡುತ್ತಿದ್ದವು. ಆ ಪ್ರಶ್ನೆಗಳ ಕೆಲವು ಝಲಕುಗಳು ಹೀಗಿವೆ:

ಸರ್ರಾ, ನಾ ಡಿಗ್ರೀ ಮಾಡೀನ್ರೀ, ಆದ್ರ ನನಗ ಇಂಗ್ಲೀಸು ಮಾತಾಡೂದಿಕ್ಕ ಬರಾಂಗಿಲ್ರೀ, ಈ ಕೆಲ್ಸಕ್ಕೆ ನಾ ಅಪ್ಲಾಯ್ ಮಾಡ್ಬೋದೆನ್ರೀ?

ಸರ್ರಾ, ನಾ ಬೆಂಗಳೂರು ಹೆಂಗೈತಿ ಅಂತಾ ನೋಡಿಲ್ರೀ, ಅಲ್ಲಿ ಬಂದ್ರಾ ನಮಗೆ ಇರಾಕ್ ರೂಮು, ಊಟ ತಿಂಡಿ ವ್ಯವಸ್ಥಾ ಹೆಂಗ್ರೀ?

ಸರ್ರಾ, ನಾನು ನಮ್ಮವ್ವನ ನೋಡ್ದೆ ಇರಾಕ್ ಆಗುದಿಲ್ರಿ, ತಿಂಗಳಾಗೊಮ್ಮಿ ಊರಿಗೋಗಿ ಬರಾಕ್ ಬುಡ್ತೀರೆನ್ರೀ?

ಹೀಗೆ ಬರುತ್ತಿದ್ದ ಥರಾವರಿ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ಬೆಂಗಳೂರಿಗೆ ಬರಲು ಒಪ್ಪಿಸಿದ್ದೆ, ನಮ್ಮ ಕಛೇರಿಯ ಮೇಲೆಯೇ ಮಾಲೀಕರನ್ನೊಪ್ಪಿಸಿ, ದೊಡ್ಡದೊಂದು ವಸತಿಯನ್ನೇ ಕಟ್ಟಿಸಿದ್ದೆ.  ಹಲಸೂರಿನ ಹೃದಯಭಾಗದಲ್ಲಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದುದರಿಂದ ನಗರದ ಯಾವುದೇ ಭಾಗಕ್ಕೆ ಬಸ್ ಹಿಡಿದು ಹೋಗಿ ಬರಲು ಅನುಕೂಲಕರವಾಗಿತ್ತು. ಹೀಗೆ ಸುಮಾರು ನೂರೈವತ್ತು ಜನರ ತಂಡವನ್ನು ನೇಮಕಾತಿ ಮಾಡಿ, ಅವರಿಗೆ ಸೂಕ್ತ ತರಬೇತಿಯನ್ನು ನೀಡಿ, ನಮಗೆ ಸಿಕ್ಕಿದ್ದ ಕಾಲ್ ಸೆಂಟರ್ ಗುತ್ತಿಗೆಯಲ್ಲಿ ಭದ್ರತಾ ರಕ್ಷಕರನ್ನಾಗಿ ನಿಯೋಜಿಸಿದ್ದೆ.  ಅವರ ಮೇಲುಸ್ತುವಾರಿಗಾಗಿ ಇಬ್ಬರು ಮೇಲ್ವಿಚಾರಕರನ್ನು ನಿಯಮಿಸಿದ್ದೆ.  ಆದರೂ ಪ್ರತಿದಿನ ಕೆಲಸ ಹೇಗೆ ನಡೆಯುತ್ತಿದೆ, ಮತ್ತೇನಾದರೂ ಅವಘಡಗಳು ಸಂಭವಿಸುವ ಅವಕಾಶಗಳಿವೆಯೇ ಹೇಗೆ ಎನ್ನುವುದನ್ನು ಸ್ವಯಂ ಖಾತ್ರಿಗೊಳಿಸಿಕೊಳ್ಳಲು ಯಾವಾಗಂದರಾಗ ನನ್ನ "ರೋಡ್ ಕಿಂಗ್" ಬೈಕನ್ನು  ಕಾಲ್ ಸೆಂಟರಿನತ್ತ ಓಡಿಸುತ್ತಿದ್ದೆ.  ಹೀಗಾಗಿ ನನ್ನ ದೈನಂದಿನ ಚಟುವಟಿಕೆಗಳಲ್ಲಿ ಬಹಳ ಏರುಪೇರಾಗತೊಡಗಿತು, ಅದಿನ್ಯಾವ ಸೀಮೆಯ ಕೆಲಸ ಮಾಡ್ತೀರ್ರೀ, ಒಂದು ದಿನವಾದರೂ ಸಮಯಕ್ಕೆ ಸರಿಯಾಗಿ ಮನೆಗೆ ಬರೋದಿಲ್ಲ ಅಂತ ಶ್ರೀಮತಿ ಮನೆಯಲ್ಲಿ ಸಿಡಿಯುತ್ತಿದ್ದಳು. ಮಕ್ಕಳೊಡನೆಯೂ ನನ್ನ ಒಡನಾಟ ಕಡಿಮೆಯಾಗಿತ್ತು, ನನ್ನ ಗಮನ ಪೂರ್ತಿ ನನ್ನ ಕೆಲಸದ ಮೇಲಿತ್ತು, ಪ್ರತಿಭಾಳಿಗಾದ ಅನ್ಯಾಯ ಮತ್ಯಾವ ಮಹಿಳಾ ಉದ್ಯೋಗಿಗೂ ಆಗಬಾರದೆನ್ನುವುದು ಸದಾ ನನ್ನ ಮನಸ್ಸಿನಲ್ಲಿ ಕೊರೆಯುತ್ತಾ ನನ್ನನ್ನು ಸದಾ ಜಾಗೃತಾವಸ್ಥೆಯಲ್ಲಿಟ್ಟಿತ್ತು. ಇದರಿಂದಾಗಿ ನಗುನಗುತ್ತಲೇ ಕೆಲಸಕ್ಕೆ ಸೇರಿದ್ದ ಕೆಲವರು ತಮ್ಮ ಜವಾಬ್ಧಾರಿಯನ್ನು ಉಪೇಕ್ಷಿಸಿ ಕೆಲವು ಮಹಿಳಾ ಉದ್ಯೋಗಿಗಳನ್ನು ಮಾರ್ಗ ಮಧ್ಯದಲ್ಲಿಯೇ ಇಳಿಯಲು ಬಿಟ್ಟಾಗ ನನ್ನಿಂದ ಸಾಕಷ್ಟು ಬೈಸಿಕೊಳ್ಳುತ್ತಿದ್ದರು, ಕೆಲವರಿಗೆ ಒದೆಗಳು ಬಿದ್ದದ್ದು ಉಂಟು!

ನಾವೆಷ್ಟೇ ಕಟ್ಟುನಿಟ್ಟಾಗಿ ಸಂಸ್ಥೆಯು ರೂಪಿಸಿದ್ದ ಭದ್ರತಾ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದರೂ ಕೆಲವು ಮಹಿಳಾ ಉದ್ಯೋಗಿಗಳು ಚಾಲಕನಿಗೆ ಹಾಗೂ ಭದ್ರತಾ ರಕ್ಷಕನಿಗೆ ಇಲ್ಲದ ಸಬೂಬು ಹೇಳಿ, ಮನೆ ತಲುಪುವ ಮುಂಚೆಯೇ ಎಲ್ಲೋ ಒಂದು ಕಡೆ ಇಳಿದು ಬಿಡುತ್ತಿದ್ದರು.  ಆ ನಂತರ ಅವರು ಮತ್ತೆ ಮನೆ ತಲುಪಿದರೋ ಇಲ್ಲವೋ ಎನ್ನುವುದನ್ನು ನಾವು ಖಾತ್ರಿಯಾಗಿ ಸಂಸ್ಥೆಗೆ ತಿಳಿಸಲಾಗುತ್ತಿರಲಿಲ್ಲ!  ದಿನದಿಂದ ದಿನಕ್ಕೆ ಈ ರೀತಿ ದೂರುಗಳು ಹೆಚ್ಚಾದಂತೆ ನನ್ನ "ರಾತ್ರಿ ಗಸ್ತು"ಗಳೂ ಹೆಚ್ಚಾದವು. ಆ ರಾತ್ರಿಗಸ್ತಿನ ಸಮಯದಲ್ಲಿ ನನಗೆ ತಿಳಿದು ಬಂದ ಸಂಗತಿಗಳು ಬೆಚ್ಚಿ ಬೀಳಿಸುವಂತಿದ್ದವು. ಸುಮಾರು ೫೦೦ ಜನರಿಂದ ಆರಂಭಗೊಂಡ ಆ ಕಾಲ್ ಸೆಂಟರ್ ಕ್ರಮೇಣ ವಿಸ್ತಾರಗೊಳ್ಳುತ್ತಾ ೪೦೦೦ ಉದ್ಯೋಗಿಗಳ ಮಟ್ಟ ತಲುಪಿತ್ತು.  ಅದಕ್ಕೆ ತಕ್ಕಂತೆ ನಮ್ಮ ಭದ್ರತಾ ರಕ್ಷಕರ ಸಂಖ್ಯೆಯೂ ವೃದ್ಧಿಗೊಂಡಿತ್ತು.  ದಿನೇದಿನೇ ದೂರುಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು!  ಈ ದೂರುಗಳನ್ನು ನಿಯಂತ್ರಿಸಲು ನಾನು ಅಖಾಡಕ್ಕೆ ಇಳಿಯಬೇಕಾಯಿತು.  ಹಾಗೆ ಎಲ್ಲ ಭದ್ರತಾ ರಕ್ಷಕರನ್ನು ವಿಚಾರಿಸಿದಾಗ  ಕಂಡು ಬಂದ ಕೆಲವು ಅಂಶಗಳು ಇಂತಿವೆ. 

ಮನೆಯಿಂದ ಹೊರಟು ಕೆಲಸಕ್ಕೆ ಬರುವಾಗ ಕೆಲವು ಮಹಿಳಾ ಉದ್ಯೋಗಿಗಳು  ತಮ್ಮ ಮೊಬೈಲ್ ಫೋನನ್ನು ಕಿವಿಗಿಟ್ಟರೆ ಅದನ್ನು ಇಳಿಸುತ್ತಿದ್ದುದು ಕಛೇರಿಯ ಬಳಿಗೆ ಬಂದಾಗಲೇ!   ತಮ್ಮ ಬಾಯ್ ಫ್ರೆಂಡ್ ಜೊತೆಗೆ ಅವರಾಡುತ್ತಿದ್ದ ಎಲ್ಲ ಮಾತುಗಳೂ ಮುಂದಿನ ಸೀಟಿನಲ್ಲಿ ಕುಳಿತಿದ್ದ ಭದ್ರತಾ ರಕ್ಷಕನ ಕಿವಿಗೆ  ಬೀಳುತ್ತಿತ್ತು. ಕೆಲಸದಿಂದ ಮನೆಗೆ ಹೊರಟಾಗ ಎಲ್ಲಿ ಇಳಿಯಬೇಕು, ಎಲ್ಲಿ ಮೀಟ್ ಆಗಬೇಕು, ಯಾವ ಹೋಟೆಲಿನಲ್ಲಿ ಊಟ, ಎಲ್ಲಿ ಮೋಜು ಮಸ್ತಿ! ಎಲ್ಲವೂ ಮೊಬೈಲಿನಲ್ಲೇ ನಿರ್ಧಾರವಾಗುತ್ತಿತ್ತಂತೆ!  ಜೊತೆಗೆ ಹೇಗೆ ಭದ್ರತಾ ರಕ್ಷಕನಿಗೆ ಸಬೂಬು ಹೇಳಿ ತಪ್ಪಿಸಿಕೊಳ್ಳಬೇಕೆನ್ನುವುದನ್ನೂ ಅವರೇ ಹೇಳಿ ಕೊಡುತ್ತಿದ್ದರಂತೆ!  ಮಾತಿಗೆ ಜಗ್ಗದ ರಕ್ಷಕರಿಗೆ ಕೆಲವೊಮ್ಮೆ ಹಣ ಕೊಟ್ಟದ್ದು ಉಂಟಂತೆ! ಹೀಗೆ ಎಲ್ಲಾ ವಿವರಗಳನ್ನು ಪಡೆದು ಕೆಲವು ಮಹಿಳಾ ಉದ್ಯೋಗಿಗಳನ್ನು ಉಲ್ಲೇಖಿಸಿ ಒಂದು ಸವಿಸ್ತಾರವಾದ ವರದಿಯನು ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ನೀಡಿದ್ದೆ.  ಪ್ರತಿಭಾ ಪ್ರಸಂಗ ಮತ್ತೊಮ್ಮೆ ಮರುಕಳಿಸಬಾರದು ಅನ್ನುವಂತಿದ್ದರೆ ಇವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದೂ ಉಲ್ಲೇಖಿಸಿದ್ದೆ. ಇದಾದ ನಂತರ ದೂರುಗಳ ಸಂಖ್ಯೆ ಕಡಿಮೆಯಾಯಿತು, ಆದರೆ ನನಗೆ ಕೆಲವು ಬೆದರಿಕೆ ಕರೆಗಳು ಬರಲಾರಂಭಿಸಿದವು!   "ಲೇ, ನಮ್ ಉಡ್ಗಿ ಮ್ಯಾಲೆ ಕಂಪ್ಲೇಂಟ್ ಮಾಡ್ತಿಯೇನ್ಲಾ, ನಮ್ ಕೈಗೆ ಸಿಕ್ಕು, ನಿನ್ನ ನೋಡ್ಕೊಂತೀವಿ" ಅನ್ನುವ ಕರೆಗಳು ಮಾಮೂಲಾದವು. ಎಂತೆಂಥದಕ್ಕೋ ಅಂಜದಿದ್ದ ನಾನು ಇವರ ಬೆದರಿಕೆ ಕರೆಗಳಿಗೆ ಹೆದರುವಂಥವನಾಗಿರಲಿಲ್ಲ! ಕ್ರಮೇಣ ಆ ಕರೆಗಳು ನಿಂತು ಹೋದವು.

ಪ್ರತಿ ಭಾನುವಾರ ಬೆಳಿಗ್ಗೆ  ಆ ಕಾಲ್ ಸೆಂಟರಿನಲ್ಲಿ ನಮ್ಮ ಭದ್ರತಾ ರಕ್ಷಕರಿಗೆ ತರಬೇತಿ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೆ. ನಾನು ಹಾಗು ಇಬ್ಬರು ಮೇಲ್ವಿಚಾರಕರು ಎಲ್ಲ ಭದ್ರತಾ ರಕ್ಷಕರನ್ನು ಭೇಟಿಯಾಗಿ ಅವರಿಗೆ ಕಾಫಿ, ತಿಂಡಿ ಕೊಡಿಸಿ, ಆ ವಾರದಲ್ಲಿ ಅವರ ಕೆಲಸದ ಸಮಯದಲ್ಲಿ ನಡೆದ ಘಟನೆಗಳ ಬಗ್ಗೆ ಕೂಲಂಕುಶ ವಿವರ ಪಡೆದುಕೊಳ್ಳುತ್ತಿದ್ದೆವು. ಆಕಸ್ಮಾತ್ ಯಾವುದಾದರು ಅಹಿತಕರ ಘಟನೆ ನಡೆದಿದ್ದಲ್ಲಿ ಅಥವಾ ಎದುರಾದಲ್ಲಿ ಹೇಗೆ ಎದುರಿಸಬೇಕು, ಮಹಿಳಾ ಉದ್ಯೋಗಿಗೆ ಹೇಗೆ ರಕ್ಷಣೆ ನೀಡಬೇಕು ಎನ್ನುವುದರ ಬಗ್ಗೆ ತರಬೇತಿ ನೀಡುತ್ತಿದ್ದೆವು. ಕೆಲವೊಮ್ಮೆ ನಗರದ ಪ್ರಖ್ಯಾತ ಕರಾಟೆ ಮಾಸ್ಟರುಗಳನ್ನು ಕರೆಸಿ ಎಲ್ಲ ಭದ್ರತಾ ರಕ್ಷಕರಿಗೂ ಆತ್ಮರಕ್ಷಣೆಯ ತರಬೇತಿ ಕೊಡಿಸಿದ್ದು ಉಂಟು!  ಹೀಗೊಮ್ಮೆ  ಭಾನುವಾರದ ಬೆಳಿಗ್ಗೆ ಕೆಳಮಹಡಿಯಲ್ಲಿ ತರಬೇತಿ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಕಟ್ಟಡ ಮೇಲ್ವಿಚಾರಕರೊಬ್ಬರು, ಕಟ್ಟಡದ ಎಲ್ಲಾ ಸ್ಯಾನಿಟರಿ ಪೈಪ್ ಲೈನುಗಳು ಬ್ಲ್ಯಾಕ್ ಆಗಿರುವುದರಿಂದ ತಳಮಹಡಿಯ ಪೈಪುಗಳನ್ನು ಓಪನ್ ಮಾಡಬೇಕಾಗಿದೆ, ನಿಮ್ಮ ತರಬೇತಿಯನ್ನು ಬೇಗ ಮುಗಿಸಿ ಅಂದರು.  ಸರಿಯೆಂದು ಬೇಗಬೇಗನೆ ನಾವು ಮುಗಿಸುವಷ್ಟರಲ್ಲಿ ಆತುರಗಾರ ಕಾರ್ಮಿಕನೊಬ್ಬ ಅಲ್ಲಿದ್ದ ಸ್ಯಾನಿಟರಿ ಪೈಪನ್ನು ಒಡೆದು ಓಪನ್ ಮಾಡೇ ಬಿಟ್ಟಿದ್ದ!  ಇಡೀ ಕಟ್ಟಡದ ಎಲ್ಲಾ ಪಾಯಿಖಾನೆಗಳಿಂದ ಬಂದು ಕಟ್ಟಿಕೊಂಡಿದ್ದ  ಕಸಕಲ್ಮಶಗಳೆಲ್ಲಾ ಒಮ್ಮೆಗೇ ಹೊರಬಂದು  ಕ್ಷಣಾರ್ಧದಲ್ಲಿ  ಇಡೀ ಕೆಳಮಹಡಿ  ಕೊಚ್ಚೆ ನೀರಿನ ಗಬ್ಬಿನಿಂದ ಆವೃತವಾಗಿತ್ತು. ಅತ್ತಿತ್ತ ಓಡಿದ ನಮ್ಮ ಭದ್ರತಾ ರಕ್ಷಕರೆಲ್ಲಾ ಮೂಗು ಮುಚ್ಚಿಕೊಂಡು  ನಿಂತಿದ್ದರು. ಅಲ್ಲಿಗೆ ಬಂದ ಕಟ್ಟಡ ಮೇಲ್ವಿಚಾರಕ ಯಾರನ್ನೋ ಎತ್ತರದ ಧ್ವನಿಯಲ್ಲಿ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದ!  ಅವನು ಯಾರನ್ನು ಬೈಯ್ಯುತ್ತಿದ್ದಾನೆಂದು ನೋಡಲು ನಾನು ಅತ್ತ ಹೊರಟರೆ ಎದುರಾಗಿದ್ದು ಸ್ಯಾನಿಟರಿ ಪೈಪಿನಿಂದ ಹೊರಬಂದಿದ್ದ ನೂರಾರು ಕಾಂಡೋಮುಗಳ ರಾಶಿ ರಾಶಿ!  ನೋಡಿ ಸಾರ್, ಬೇವಾರ್ಸಿಗಳು, ಕೆಲಸ ಮಾಡೋದಿಕ್ಕೆ ಅಂತ ಬರ್ತಾರೆ, ತಾವು ಸಂಪಾದನೆ ಮಾಡೋ ಜಾಗಾನೇ ಲಾಡ್ಜು ಮಾಡ್ಕೊಂಡಿದ್ದಾರೆ, ಇವರಿಗೆ ಇನ್ನೆಲ್ಲೂ ಬೇರೆ ಜಾಗ ಸಿಗಲ್ವಾ,  ಮಜಾ ಮಾಡಿ ಎಲ್ಲಾ ತೊಗೊಂಡು ಬಂದು ಟಾಯ್ಲೆಟ್ಟಿನಲ್ಲಿ ಹಾಕಿದ್ದಾರೆ ಅಂತ ವಾಚಾಮಗೋಚರವಾಗಿ ಮತ್ತೆ ಬೈಯ್ಯಲಾರಂಭಿಸಿದ! ಅವನಿಗೆ ಏನು ಹೇಳಬೇಕೋ ತಿಳಿಯದೆ ನಾನು ಮೂಕನಾಗಿ ನಿಂತಿದ್ದೆ.  ನನ್ನ ಬಳಿ ಬಂದ ಮೇಲ್ವಿಚಾರಕ ಬನ್ನಿ ಸಾರ್ ಹೋಗೋಣ, ಯಾಕೆ ನಿಂತಿದ್ದೀರಾ, ಈ ಗಬ್ಬು ವಾಸನೇಲ್ಲಿ , ಇಲ್ಲಿ ಇದೆಲ್ಲಾ ಕಾಮನ್ನು ಅಂದ!  ಅವನೇನೋ ಇದು ಕಾಮನ್ನು ಅಂದ, ಆದರೆ ಆ "ಕಾಮ"ನ್ನು  ಅನ್ನೋ ಪದವನ್ನು ಅರಗಿಸಿಕೊಳ್ಳಲು ನನಗೆ ಬಹಳ ಕಷ್ಟವಾಗಿತ್ತು.

ಮೈಸೂರು ಪಾಕು ಮೈಸೂರು ಮಲ್ಲಿಗೆ !




ರವಿಯೋಡುತಲಿದ್ದ ಪಡುವಣದ ಕಡಲಲ್ಲಿ  
ಮುಳುಗುತೇಳುತ ಪವಡಿಸುವ ಕನಸಲ್ಲಿ!

ಕಠಿಣ ಬಾಳಹಾದಿಯ ನಿತ್ಯಸಂಘರ್ಷದಲ್ಲಿ 
ಮನೆ ತಲುಪುವುದು ತಡವಾಗುವುದಲ್ಲಿ !

ಕಾದು ಸೋತಿಹಳು ಮನದೊಡತಿಯಲ್ಲಿ 
ಮಾತಿರದ ಮೂಕ ತಲೆಬಾಗಿಲಿನಲ್ಲಿ!  

ಹಲವು ಸೂಕ್ಷ್ಮ ಯೋಚನೆಗಳ ಭರದಲ್ಲಿ
ಮನೆಯೊಡೆಯ ಬರುತಲಿಹ ಕಾತರದಲ್ಲಿ!

ಬಾಳಗೆಳತಿಯ ಮುನಿಸ ಕಳೆವಾಸೆಯಲ್ಲಿ
ಕೊಂಡನವನು ಹಾದಿಯಂಗಡಿಯಲ್ಲಿ!

ಇಬ್ಬರಲು ಪ್ರೇಮದ ನಗೆಯು ಉಕ್ಕುವುದಲ್ಲಿ 
ಮೈಸೂರು ಪಾಕು ಮೈಸೂರು ಮಲ್ಲಿಗೆಯಲ್ಲಿ!

Friday, July 25, 2014

ನಾಡನ್ನಾಳುವವರಿಗೊಂದು ಬಹಿರಂಗ ಪತ್ರ.



ಮಾನ್ಯರೇ, ಇತ್ತೀಚಿಗೆ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ನೋಡುತ್ತಿದ್ದರೆ ನಾವು ಯಾವ ಯುಗದಲ್ಲಿ ಜೀವಿಸುತ್ತಿದ್ದೇವೆಂದು ಭಯವಾಗುತ್ತಿದೆ.  ನಮ್ಮ ಹೆಣ್ಣು ಮಕ್ಕಳ ಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮನ್ನು ನಾವೇ ಹಲವು ಬಾರಿ ಪ್ರಶ್ನಿಸಿಕೊಳ್ಳುವಂತಾಗಿದೆ.  "ಯತ್ರ ನಾರ್ಯಸ್ತು ಪೂಜ್ಯಂತೇ, ತತ್ರ ದೇವತಾಃ ರಮಂತೇ" ಎಂದ ನಾಡಿನಲ್ಲಿ ಇದೇನಾಗುತ್ತಿದೆ?  ಸರಣಿ ಅತ್ಯಾಚಾರಗಳು, ಕೊಲೆಗಳು, ದಿನನಿತ್ಯದ ಸುದ್ಧಿಗಳಾಗಿವೆ. ಈ ಘೋರ ಅತ್ಯಾಚಾರಗಳನ್ನು, ಕೊಲೆಗಳನ್ನು ತಡೆಯಲಾಗುವುದಿಲ್ಲವೇ? ತಡೆಯಲು ಖಂಡಿತಾ ಸಾಧ್ಯವಿದೆ.  ಆ ನಿಟ್ಟಿನಲ್ಲಿ ಬೇಕಿರುವುದು ಈ ದುರಂತಗಳನ್ನು ನಿಲ್ಲಿಸಲೇಬೇಕೆನ್ನುವ ಸಧೃಡ ಇಚ್ಚಾಶಕ್ತಿ ಮಾತ್ರ.  ಆ ಇಚ್ಚಾಶಕ್ತಿಯ ಕೊರತೆಯೇ ಇಂದು ನಮ್ಮ ದೇಶವನ್ನು, ರಾಜ್ಯವನ್ನು, "ಉದ್ಯಾನ ನಗರಿ" ಯಾಗಿದ್ದ ನಮ್ಮ ಸುಂದರ ಬೆಂಗಳೂರನ್ನು ವಿಶ್ವದೆದುರು "ಅತ್ಯಾಚಾರಿಗಳ ಸ್ವರ್ಗ"ವೆಂದು ಬಿಂಬಿಸುತ್ತಿದೆ, ತಲೆತಗ್ಗಿಸುವಂತೆ ಮಾಡಿದೆ.

ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನನ್ನದೊಂದು ಸಲಹೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿ ಯಾರನ್ನೂ ನೋಯಿಸುವ ಅಥವಾ ಯಾರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ಧೇಶ ಖಂಡಿತಾ ಇಲ್ಲ.  ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳಲೇಬೇಕಾಗುತ್ತದೆ.

೧. ಬ್ರಿಟಿಷರ ಕಾಲದ ಶೈಕ್ಷಣಿಕ ಪದ್ಧತಿಯ ಆಮೂಲಾಗ್ರ ಬದಲಾವಣೆಯಾಗಬೇಕು. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಂಥ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕು. ಎಲ್ಲ ಶಾಲೆಗಳಲ್ಲಿಯೂ ಪೋಷಕರು ಮತ್ತು ಶಾಲಾ ಸಿಬ್ಬಂದಿಯೊಳಗೊಂಡ ಸಮಿತಿಯೊಂದನ್ನು ರಚಿಸಿ, ಪ್ರತಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಸಭೆ ಸೇರಿ ಮಕ್ಕಳ ಬೆಳವಣಿಗೆಯ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಕಡ್ಡಾಯಗೊಳಿಸಬೇಕು. ಮಕ್ಕಳ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿಯ ಬಗ್ಗೆ ಪೂರಕ ಮಾಹಿತಿ ವಿನಿಮಯವಾಗಬೇಕು. ಶಾಲಾ ಕಾಲೇಜುಗಳು ಉತ್ತಮ ಪ್ರಜೆಗಳನ್ನು ರೂಪಿಸುವ ತಾಣಗಳಾಗಬೇಕು.  ಎನ್.ಸಿ.ಸಿ. ಅಥವಾ ಮಿಲಿಟರಿ ಶಿಕ್ಷಣವನ್ನು ಹೈಸ್ಕೂಲಿನಿಂದಲೇ ಕಡ್ಡಾಯಗೊಳಿಸಬೇಕು. 

೨. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಅಂತರ್ಜಾಲ ಬಳಕೆಯನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು. ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಂತರ್ಜಾಲ ಬಳಸಬೇಕಿದ್ದಲ್ಲಿ ಅದು ಶಿಕ್ಷಕರ ಮೇಲುಸ್ತುವಾರಿಯಲ್ಲಿಯೇ ಆಗುವಂತೆ ನಿಯಮ ರೂಪಿಸಬೇಕು. ನಾಯಿಕೊಡೆಗಳಂತೆ ಮೇಲೆದ್ದಿರುವ ಸೈಬರ್ ಕೆಫೆಗಳನ್ನು ನಿಯಂತ್ರಿಸಬೇಕು.  ಲೈಂಗಿಕ ಕ್ರಿಯೆಗಳನ್ನು ತೋರಿಸುವ ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಂತರ್ಜಾಲ ತಾಣಗಳನ್ನು ಅಪ್ರಾಪ್ತ ಮಕ್ಕಳಿಗೆ ದೊರಕದಂತೆ ನಿರ್ಬಂಧಿಸಬೇಕು. ಶಾಲಾಮಟ್ಟದಲ್ಲಿಯೇ ಲೈಂಗಿಕ ಶಿಕ್ಷಣವನ್ನು ನೀಡಿ, ಲೈಂಗಿಕತೆಯ ಬಗ್ಗೆ ಇರುವ ಅಸಹಜ ನಂಬಿಕೆಗಳನ್ನು ಹೋಗಲಾಡಿಸಬೇಕು.

೩. ಗೌರವಯುತ ಉಡುಪುಗಳನ್ನು ಶಾಲಾ ಸಮವಸ್ತ್ರವಾಗಿಸಬೇಕು, ಕೆಲವು ಪ್ರತಿಷ್ಠಿತ ಶಾಲೆಗಳಲ್ಲಿರುವ ಅರೆಬೆತ್ತಲೆ ಸಮವಸ್ತ್ರಗಳನ್ನು ನಿರ್ಬಂಧಿಸಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಉಡುಪನ್ನು ಸಮವಸ್ತ್ರವನ್ನಾಗಿ ಕಡ್ಡಾಯಗೊಳಿಸಬೇಕು. ಶಿಕ್ಷಕರ ಆಯ್ಕೆಯಲ್ಲಿ ಅತ್ಯಂತ ಜಾಗರೂಕತೆ ತೋರಬೇಕು, ನೈತಿಕ ಮೌಲ್ಯಗಳನ್ನು, ದೇಶದ ಚರಿತ್ರೆಯನ್ನು ಎತ್ತಿ ಹಿಡಿಯವಂಥವರಿಗೆ ಶಿಕ್ಷಕ ಹುದ್ದೆ ನೀಡಬೇಕು.

೪. ಅತ್ಯಂತ ಪ್ರಭಾವಿ ಮಾಧ್ಯಮವಾದ ಚಲನಚಿತ್ರ ಹಾಗೂ ದೂರದರ್ಶನಗಳಲ್ಲಿ ಹೆಣ್ಣನ್ನು ಅರೆಬೆತ್ತಲಾಗಿ, ಭೋಗದ ವಸ್ತುವಾಗಿ ತೋರಿಸುವುದನ್ನು ನಿರ್ಬಂಧಿಸಬೇಕು. ಚಲನಚಿತ್ರ ನಿಯಂತ್ರಣ ಮಂಡಳಿಯಲ್ಲಿ ಸಮಾಜಶಾಸ್ತ್ರ/ಮನಃಶಾಸ್ತ್ರ  ಪರಿಣತರನ್ನು ಸದಸ್ಯರನ್ನಾಗಿಸಬೇಕು. ಹಿಂಸೆ, ಕ್ರೌರ್ಯಗಳನ್ನು ವೈಭವೀಕರಿಸುವ ಚಲಚಿತ್ರಗಳನ್ನು ನಿರ್ಬಂಧಿಸಬೇಕು. ತನ್ಮೂಲಕ ಸಮಾಜದಲ್ಲಿ ವಿಕೃತ ಮನೋಭಾವವನ್ನು ಕಡಿಮೆಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

೫. ಪ್ರತಿಯೊಂದು ಪೋಲೀಸ್ ಠಾಣೆಯಲ್ಲಿಯೂ ಪ್ರತ್ಯೇಕ ಮಹಿಳಾ ವಿಭಾಗವಿರಬೇಕು.  ಮಹಿಳೆಯರಿಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು ಮಹಿಳಾ ಪೊಲೀಸರೇ ನಿಭಾಯಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಈಗಿರುವ ಸಡಿಲ ಕಾನೂನುಗಳನ್ನು ಪುನರ್ವಿಮರ್ಶಿಸಿ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು.  ಅತ್ಯಾಚಾರಿಗಳಿಗೆ ಆಗುವ ಶಿಕ್ಷೆಯನ್ನು ಸಾರ್ವಜನಿಕವಾಗಿ ತೋರಿಸಿ, ವಿಕೃತಕಾಮಿಗಳ ಮನದಲ್ಲಿ  ಕಾನೂನಿನ ಬಗ್ಗೆ ಭಯ ಹುಟ್ಟಿಸಬೇಕು.

೬. ಯಾವುದೇ ಅಪರಾಧ ಹಿನ್ನೆಲೆಯುಳ್ಳದವರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು.  "ಯಥಾ ರಾಜಾ ತಥಾ ಪ್ರಜಾ" ಎಂವಂತೆ ನಾಯಕರು ನೀತಿವಂತರಾಗಿದ್ದರೆ ಪ್ರಜೆಗಳು ನೀತಿವಂತರಾಗಿರುತ್ತಾರೆನ್ನುವುದನ್ನು ಮನಗಾಣಬೇಕು.

( ನನಗೆ ತೋಚಿದ ಕೆಲವು ಅಂಶಗಳನ್ನು ಉಲ್ಲೇಖಿಸಿ ಈ ಬಹಿರಂಗ ಪತ್ರ ಬರೆದಿದ್ದೇನೆ.  ವಿಚಾರವಂತರು ಇನ್ನಷ್ಟು ವಿಷಯಗಳನ್ನು ಇದರೊಂದಿಗೆ ಸೇರಿಸಬಹುದು, ಯಾವ ಭಾಷೆಗೆ ಬೇಕಾದರೂ ತರ್ಜುಮೆ ಮಾಡಿ, ಯಾರಿಗೆ ಬೇಕಾದರೂ ಕಳುಹಿಸಬಹುದು. ಇದಕ್ಕೆ ನನ್ನ ಸಂಪೂರ್ಣ ಸಹಮತಿಯಿದೆ. ಮುಖ್ಯವಾಗಿ ನಮಗೆ ಬೇಕಿರುವುದು ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗುವುದು.)

Monday, May 12, 2014

ನೆನಪಿನಾಳದಿಂದ - ೨೩: ಎಸ್.ಎಸ್.ಎಲ್.ಸಿ. ಫಲಿತಾಂಶದ ದಿನ !



ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ೧೯೮೦ ರಿಂದ ೧೯೮೪ ರವರೆಗೆ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸ ನಡೆದಿತ್ತು.  ಅಪ್ಪನ ಹೋಟೆಲ್ಲಿನ ಕೆಲಸದ ಒತ್ತಡ ತಾಳಲಾರದೆ, ಅಪ್ಪನ ಹೊಡೆತಗಳಿಂದ ನೊಂದು ಇದೇ ಅವಧಿಯಲ್ಲಿ ಮೂರು ಬಾರಿ ಮನೆ ಬಿಟ್ಟು ಹೋಗಿದ್ದೆ.  ಹಾಗೆ ಓಡಿ ಹೋದವನನ್ನು ಹುಡುಕಿಕೊಂಡು ಬಂದು ಅಪ್ಪ ಮತ್ತೆ ಶಾಲೆಗೆ ಸೇರಿಸುತ್ತಿದ್ದರು.  ಆಗ ಎಲ್ಲ ಉಪಾಧ್ಯಾಯರಿಗೂ ನನ್ನ ತುಂಟಾಟ, ಮುಂಗೋಪಗಳ ಬಗ್ಗೆ ದೂರು ಹೇಳುತ್ತಿದ್ದರು.  ಅಪ್ಪನ ದೂರುಗಳಿಂದ ಉತ್ತೇಜಿತರಾಗಿ ನನ್ನನ್ನು ಹೊಡೆಯದ ಉಪಾಧ್ಯಾಯರೇ ಆ ಶಾಲೆಯಲ್ಲಿರಲಿಲ್ಲ!  ಅಪ್ಪನ ಬೈಗುಳ, ದೂರುಗಳು, ಉಪಾಧ್ಯಾಯರ ಹೊಡೆತಗಳು ನನ್ನನ್ನು ಮಾನಸಿಕವಾಗಿ ಇನ್ನಷ್ಟು ಮೊಂಡನನ್ನಾಗಿ ಮಾಡಿ, ಯಾವುದಕ್ಕಾದರೂ ಸರಿಯೇ. ಒಂದು ಕೈ ನೋಡಿಯೇ ಬಿಡೋಣ ಅನ್ನುವ ಒರಟನನ್ನಾಗಿಸಿದ್ದಂತೂ ನಿಜ!! ಅವರಲ್ಲೆಲ್ಲಾ ತುಮಕೂರಿನಿಂದ ಬರುತ್ತಿದ್ದ ಜಿ.ಕೆ.ಗುಂಡಣ್ಣ ಮತ್ತು ಬಯಾಲಜಿ ಪದ್ಮಣ್ಣನವರು ಮಾತ್ರ ನನ್ನ ಬಗ್ಗೆ ವಿಶೇಷ ಅಕ್ಕರೆ ತೋರಿಸಿ ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸುತ್ತಿದ್ದರು.

ಶಾಲೆಯಲ್ಲಿ ಎಲ್ಲರಿಗೂ ನಾನೊಬ್ಬ "ಓಡಿ ಹೋಗುವ ಅಂಜುಬುರುಕ"ನಾಗಿ ಬಿಟ್ಟಿದ್ದೆ.  ಕೊನೆಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬಂದೇ ಬಿಟ್ಟಿತು.  ಆಗ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಜಿ.ಮಹಲಿಂಗಯ್ಯನವರು ಆ ಬಾರಿಯ ಫಲಿತಾಂಶವನ್ನು ಉತ್ತಮಗೊಳಿಸಲು ಶಾಲೆಯಲ್ಲಿಯೇ ಪ್ರತಿದಿನ ಸಂಜೆ ೬ ರಿಂದ ೯ ಘಂಟೆಯವರೆಗೆ "ವಿಶೇಷ ತರಗತಿ" ಗಳನ್ನು ಆಯೋಜಿಸಿದ್ದರು.  ಕಷ್ಟಪಟ್ಟು ಓದಿ, ಎಲ್ಲ ವಿಷಯಗಳನ್ನು ಚೆನ್ನಾಗಿ ಮನನ ಮಾಡಿಕೊಂಡು ನಾನು ಅಂತಿಮ ಕದನಕ್ಕೆ ಅಣಿಯಾಗಿದ್ದೆ.  ನನ್ನ ಆತ್ಮವಿಶ್ವಾಸದ ಪ್ರತೀಕವೆಂಬಂತೆ ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿಯೂ ನನಗೆ ಬರಬಹುದಾಗಿದ್ದ ಅಂದಾಜು ಅಂಕಗಳನ್ನು, ಪ್ರತಿಯೊಂದು ಪ್ರಶ್ನೆಯ ಮುಂದೆಯೂ, ನಮೂದಿಸಿ, ಕೊನೆಗೆ ಅವನ್ನೆಲ್ಲ ಒಟ್ಟುಗೂಡಿಸಿ, ೬೦೦ರಲ್ಲಿ ಸುಮಾರು ೩೮೭  ಅಂಕಗಳು, ಅಂದರೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತೇನೆಂದು  ನಾನು ನಂಬಿದ್ದೆ, ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಖ್ಹುಷಿಪಟ್ಟಿದ್ದೆ!  ಸಿಕ್ಕ ಸಿಕ್ಕವರಿಗೆಲ್ಲಾ ನಾನು ಪ್ರಥಮದರ್ಜೆಯಲ್ಲಿಯೇ ಪಾಸಾಗುತ್ತೇನೆಂದು ದೌಲು ಕೊಚ್ಚಿಕೊಳ್ಳುತ್ತಿದ್ದೆ.

ಆದರೆ ವಿಧಿ ಬಿಡಬೇಕಲ್ಲ!  ಆ ಖುಷಿ ಜಾಸ್ತಿ ದಿನ ಉಳಿಯಲೇ ಇಲ್ಲ!  ಅಪ್ಪ ನಡೆಸುತ್ತಿದ್ದ ಹೋಟೆಲ್ಲಿನಲ್ಲಿ ಕೆಲವು ಉಪಾಧ್ಯಾಯರು ಸಾಲದ ಲೆಕ್ಕ ಬರೆಸಿ ಊಟ, ತಿಂಡಿ ಮಾಡುತ್ತಿದ್ದರು.  ಸಂಬಳ ಬಂದಾಗ ಬಾಕಿ ಲೆಕ್ಕ ಚುಕ್ತಾ ಮಾಡುತ್ತಿದ್ದರು.  ಅವರು ಉಪಾಧ್ಯಾಯರು ಎನ್ನುವುದಕ್ಕೋ ಅಥವಾ ತಿಂಗಳಿಗೊಮ್ಮೆ ಒಟ್ಟಾಗಿ ಜಾಸ್ತಿ ಹಣ ಕೊಡುತ್ತಾರೆಂಬ ಕಾರಣಕ್ಕೋ, ಒಟ್ಟಾರೆ ಅಪ್ಪನಿಂದ ಅವರಿಗೆ ವಿಶೇಷ ಮರ್ಯಾದೆ ಸಿಗುತ್ತಿತ್ತು.  ಅವರಲ್ಲಿ ಒಬ್ಬ ಮಹಾನ್ ಉಪಾಧ್ಯಾಯರು "ನಿಮ್ಮ ಮಗನ ನಂಬರ್ ಕೊಡಿ, ನಾನು ಎಸ್.ಎಸ್.ಎಲ್.ಸಿ. ಉತ್ತರ ಪರೀಕ್ಷೆಗಳ ಮೌಲ್ಯಮಾಪನಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದೇನೆ, ಸಾಧ್ಯವಾದರೆ ಹೆಚ್ಚು ಅಂಕ ಬರುವಂತೆ ಮಾಡುತ್ತೇನೆ" ಎಂದು ಅಪ್ಪನ ಕಿವಿ ಊದಿದ್ದರು.  ಅದನ್ನು ನಂಬಿದ ಅಪ್ಪ ನನಗೆ ನಂಬರ್ ಕೊಡುವಂತೆ ಕೇಳಿದಾಗ ನಾನು ಉರಿದು ಬಿದ್ದಿದ್ದೆ.  "ಅವರೇನು ನನಗೆ ಹೆಚ್ಚು ಅಂಕ ಬರುವಂತೆ ಮಾಡುವುದು?  ಏನೂ ಬೇಕಾಗಿಲ್ಲ, ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೇನೆ.  ಪ್ರಥಮದರ್ಜೆಯಲ್ಲಿಯೇ ಪಾಸಾಗುತ್ತೇನೆ, ನಾನು ನಂಬರ್ ಕೊಡುವುದಿಲ್ಲ" ಎಂದು ಅಪ್ಪನ ಬಳಿ ವಾದಿಸಿದ್ದೆ.  ಇದರಿಂದ ಕೆರಳಿ ಕೆಂಡಾಮಂಡಲವಾದ ಅಪ್ಪ, ಹೋಟೆಲ್ಲಿನಲ್ಲಿದ್ದ ಗಿರಾಕಿಗಳ ಮುಂದೆಯೇ ನನ್ನನ್ನು ಹಿಡಿದು ಬಾಯಿಗೆ ಬಂದಂತೆ ಬೈದು ಹಿಗ್ಗಾಮುಗ್ಗಾ ಧಳಿಸಿದ್ದರು.ಕೊನೆಗೂ ಅವರಿಗೆ ನಂಬರ್ ಕೊಡದೆ ಹಾಲ್ ಟಿಕೆಟ್ಟನ್ನು ಅವರ ಮುಂದೆಯೇ ಹರಿದು ಬಿಸಾಕಿದ್ದೆ!  ಅಷ್ಟರ ಮಟ್ಟಿನ ಭಂಡಧೈರ್ಯ ನನ್ನಲ್ಲಿ ಬರಲು ಅದೇ ಅಪ್ಪನೇ ಕಾರಣರಾಗಿದ್ದರು.

ಕಣ್ಣೀರಿಡುತ್ತಾ ಮನೆಗೆ ಬಂದು ಅಮ್ಮನಿಗೆ ಆಗಿದ್ದನ್ನು ಹೇಳಿದರೆ "ನೀವು ಅಪ್ಪ ಮಕ್ಕಳದ್ದು ಯಾವಾಗಲೂ ಇದ್ದದ್ದೇ, ನೀನು ಮೊಂಡ, ಅವರು ಮುಂಗೋಪಿ, ನಿಮ್ಮಿಬ್ಬರ ಮಧ್ಯೆ ನಾನೇನು ಮಾಡಲಿ ಹೇಳು?  ನಂಬರ್ ಕೇಳಿದಾಗ ನೀನು ಸುಮ್ಮನೆ ಕೊಟ್ಟು ಬಿಡಬೇಕಿತ್ತು" ಅಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.  ನನ್ನ ನೋವಿಗೆ ಸಮಾಧಾನ ಸಿಗದೇ ಬೇಸರವಾಗಿ,ಬ್ಯಾಗಿನಲ್ಲಿ ಒಂದೆರಡು ಬಟ್ಟೆಗಳನ್ನು ತುರುಕಿಕೊಂಡು ಬೆನ್ನ ಮೇಲೆ ಹಾಕಿಕೊಂಡು, ನಾನು ಪೇಪರ್ ಹಾಕಿ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಸೈಕಲ್ ಹತ್ತಿದೆ.  ಆಗ ನಾನು ತಿಪಟೂರಿನಲ್ಲಿ ನನ್ನ ಖರ್ಚಿನ ಪುಡಿಗಾಸಿಗಾಗಿ ಉದಯವಾಣಿ ಪೇಪರ್ ವಿತರಣೆ ಮಾಡುತ್ತಿದ್ದೆ. ಅಪ್ಪನನ್ನು ಇನ್ನು ಮುಂದೆ ಯಾವುದಕ್ಕೂ ಕಾಸು ಕೇಳಬಾರದೆಂಬ ಛಲವೇ ನನ್ನನ್ನು ಪೇಪರ್ ಹಂಚಲು ಪ್ರೇರೇಪಿಸಿತ್ತು.  ಹಾಗೆ ಸೈಕಲ್ ಹತ್ತಿ ಬಂದವನು ನಮ್ಮ ಶಾಲೆಯ ಹತ್ತಿರ ಬಂದು ಸ್ವಲ್ಪ ಹೊತ್ತು ನಾನು ಓದಿದ ಆ ಶಾಲೆಯನ್ನೇ ನೋಡುತ್ತಾ ಕುಳಿತಿದ್ದವನು ಅದೇನೋ ನಿರ್ಧಾರಕ್ಕೆ ಬಂದು ಹಾಲ್ಕುರಿಕೆ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಹೊಸದುರ್ಗದ ಕಡೆಗೆ ಹೊರಟೆ.  ನನ್ನ ಚಿಕ್ಕ ಅಕ್ಕ ಆಗ ದಾವಣಗೆರೆಯ ಬಳಿಯ ಹೊಸದುರ್ಗ ರೋಡಿನಲ್ಲಿದ್ದಳು.  ಭಾವ ಎಂಥದೋ ವ್ಯಾಪಾರ ಮಾಡುತ್ತಿದ್ದ, ಅವರಿಗೊಬ್ಬ ಪುಟ್ಟ ಮಗ.  ಫಲಿತಾಂಶ ಬರುವ ತನಕ ಅಲ್ಲಿದ್ದು, ನಂತರ ಅಂಕಪಟ್ಟಿ ತೆಗೆದುಕೊಂಡು ಎಲ್ಲಾದರೂ ಹೋಗಿ ಕೆಲಸ ಮಾಡಿಕೊಂಡು ಬದುಕೋಣವೆಂದು ನನ್ನ ಮನಸ್ಸು ಲೆಕ್ಕಾಚಾರ ಹಾಕಿತ್ತು.

ಹಾಗೆ ಸೈಕಲ್ ತುಳಿದುಕೊಂಡು ಮುಸ್ಸಂಜೆಯ ಹೊತ್ತಿಗೆ ಹೊಸದುರ್ಗ ರೋಡಿಗೆ ಬಂದವನನ್ನು ನೋಡಿ ಅಕ್ಕ-ಭಾವ ಬೆಚ್ಚಿ ಬಿದ್ದಿದ್ದರು. ಇದೇನೋ ಹೀಗೆ ಎಂದವಳಿಗೆ ನಡೆದಿದ್ದೆಲ್ಲವನ್ನು ವಿವರಿಸಿ, ಯಾವುದೇ ಕಾರಣಕ್ಕೂ ನಾನು ಇಲ್ಲಿರುವುದನ್ನು ಅಪ್ಪನಿಗೆ ಹೇಳದಂತೆ ಅವಳಿಂದ ಮಾತು ತೆಗೆದುಕೊಂಡೆ.  ಆಕಸ್ಮಾತ್ ಹೇಳಿದರೆ ಇಲ್ಲಿಂದಲೂ ಓಡಿ ಹೋಗುವುದಾಗಿ ಬೆದರಿಸಿದ್ದೆ.  ನನ್ನ ಬುದ್ಧಿಯ ಅರಿವಿದ್ದ ಅಕ್ಕ ಆಯಿತು ಎಂದು ಮರು ಮಾತಿಲ್ಲದೆ ಒಪ್ಪಿಕೊಂಡಿದ್ದಳು.  ಆದರೆ ಅಲ್ಲಿ ಅಪ್ಪ ಹಿಂದೆ ಮೂರು ಬಾರಿ ನಾನು ಓಡಿ ಹೋದಾಗಲೂ ನನ್ನನ್ನು ಹುಡುಕಲು ಒದ್ದಾಡಿದ್ದನ್ನು ಕಂಡಿದ್ದ ಅಕ್ಕ ನನಗೆ ಗೊತ್ತಿಲ್ಲದಂತೆ ಸೇಟು ಅಂಗಡಿಗೆ ಹೋಗಿ ಅಲ್ಲಿಂದ ತಿಪಟೂರಿನ ಜನರಲ್ ಆಸ್ಪತ್ರೆಗೆ ಫೋನ್ ಮಾಡಿ ಅಲ್ಲಿದ್ದ ಜವಾನನೊಬ್ಬನಿಗೆ ವಿಷಯ ತಿಳಿಸಿ, ದಾದಿಯಾಗಿದ್ದ ಅಮ್ಮನಿಗೆ ತಿಳಿಸುವಂತೆ ವಿನಂತಿಸಿದ್ದಳು.  ಅವನು ತಕ್ಷಣ ನಮ್ಮ ಮನಗೆ ಹೋಗಿ ನಾನು ಅಕ್ಕನ ಮನೆಯಲ್ಲಿರುವ ವಿಷಯ ತಿಳಿಸಿದ್ದ.  ಮರುದಿನವೇ ಬಿಜಯವಾಯಿತು ಅಪ್ಪನ ಸವಾರಿ ಹೊಸದುರ್ಗ ರೋಡಿಗೆ!  ಬರುತ್ತಿದ್ದಂತೆಯೇ ಬೈಗುಳಗಳ ಮಳೆಯನ್ನೇ ಸುರಿಸುತ್ತಾ ಬಂದಿದ್ದರು!  ಸಾಕಾಗುವಷ್ಟು ಬೈದ ನಂತರ ನನಗೆ ಅವರೇ ಕೊಡಿಸಿದ್ದ ಸೈಕಲ್ಲನ್ನು ವಾಪಸ್ ತೆಗೆದುಕೊಂಡು ಹೋದರು!  ಹೋಗುವಾಗ ಅಕ್ಕನಿಗೆ " ಈ ಬೋಳಿಮಗ ದುಡಿದು ತಂದರೆ ಊಟ ಹಾಕು, ಇಲ್ಲದೆ ಇದ್ರೆ ಉಗಿದು ಆಚೆಗೋಡಿಸು" ಎಂದೂ ಹೇಳಿ ಹೋಗಿದ್ದರು!!

ಭಾವನ ಜೊತೆಯಲ್ಲಿಯೇ ಅವರ ವ್ಯಾಪಾರದಲ್ಲಿ ಸಹಾಯ ಮಾಡುತ್ತಾ ಫಲಿತಾಂಶ ಬರುವವರೆಗೂ ಕಾಲ ಕಳೆದೆ.  ನನಗಂತೂ ಒಂದೊಂದು ದಿನವೂ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು!  ಹಗಲುರಾತ್ರಿಯೆಲ್ಲಾ  ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದಂತೆ, ಚೆನ್ನಾಗಿ ಓದಿ ಯಾವುದೋ ಉನ್ನತ ಕೆಲಸಕ್ಕೆ ಸೇರಿದಂತೆ ಕನಸು ಕಾಣುತ್ತಿದ್ದೆ!  ಅದೇ ಕನಸಿನ ಗುಂಗಿನಲ್ಲಿ ಭಾವನ ಸೈಕಲ್ಲಿನಲ್ಲಿ ಅಂಗಡಿಯ ಕಡೆಗೆ ಹೋಗುತ್ತಿದ್ದವನು ಒಮ್ಮೆ ವೇಗವಾಗಿ ಬಂದ ವಿಜಯ ಬಸ್ಸಿನ ಶಬ್ಧಕ್ಕೆ ಬೆದರಿ ಕೆಳಗೆ ಬಿದ್ದು ಮೈ ಕೈಗೆಲ್ಲಾ ಗಾಯವನ್ನು ಮಾಡಿಕೊಂಡಿದ್ದೆ.  ರಸ್ತೆಯ ಎಡಬದಿಗೆ ಬೀಳುವ ಬದಲು ಬಲಬದಿಗೇನಾದರೂ ಬಿದ್ದಿದ್ದರೆ ಬಸ್ಸಿನ ಚಕ್ರದಡಿಗೆ ಸಿಕ್ಕಿ ಅಂದೇ ನನ್ನ ಕೊನೆಯಾಗುತ್ತಿತ್ತು!

ಕೊನೆಗೂ ಆ ದಿನ ಬಂದೇ ಬಿಟ್ಟಿತು!  ೧೯೮೪ರ ಮೇ ೧೫, ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ, ಬೆಳಗ್ಗಿನ ಬಸ್ಸಿಗೆ ತಿಪಟೂರಿಗೆ ಹೊರಟು ಬಿಟ್ಟೆ.  ಹಾಗೆ ಹೊರಟವನನ್ನು ಕಣ್ತುಂಬಾ ಕಂಬನಿ ತುಂಬಿಕೊಂಡು ಕಳುಹಿಸಿ ಕೊಟ್ಟಿದ್ದಳು ನನ್ನ ಚಿಕ್ಕಕ್ಕ.  "ಫಲಿತಾಂಶ ಏನೇ ಆಗಿರಲಿ, ಇಲ್ಲಿಗೇ ವಾಪಾಸ್ ಬಾರೋ, ಎಲ್ಲಿಗೂ ಹೋಗಬೇಡ, ನೀನು ಏನೇ ಓದುವುದಿದ್ದರೂ ದಾವಣಗೆರೆಯಲ್ಲಿ ಕಾಲೇಜಿಗೆ ಸೇರಿಸುತ್ತೇವೆ, ಯಾವುದಕ್ಕೂ ಯೋಚನೆ ಮಾಡಬೇಡ" ಅಂದಿದ್ದಳು.  ನನ್ನ ಮನಸ್ಸಿನ ವೇಗಕ್ಕೆ ತಕ್ಕಂತೆ ಓಡಲಾಗದ  ಬಸ್ಸಿಗೆ ಹಿಡಿ ಶಾಪ ಹಾಕುತ್ತಾ ಬೆಂಕಿಯ ಮೇಲೆ ಕುಳಿತಂತೆ ಒದ್ದಾಡುತ್ತಿದ್ದೆ.  ಕೊನೆಗೂ ಬಸುರಿಯ ಹೊಟ್ಟೆಯಂತೆ ಜನರಿಂದ ಉಬ್ಬಿಕೊಂಡಿದ್ದ ಆ ದರಿದ್ರ ಬಸ್ಸು ತಿಪಟೂರಿಗೆ ಬಂದಾಗ ಮಧ್ಯಾಹ್ನ ಎರಡು ಘಂಟೆಯಾಗಿತ್ತು.

ಬಸ್ ಇಳಿದವನು ಸೀದಾ ಶಾಲೆಯ ಕಡೆಗೆ ಓಡಿದೆ.  ಶಾಲೆ ಹತ್ತಿರ ಬರುತ್ತಿದ್ದಂತೆ ನನ್ನಲ್ಲಿದ್ದ ಭರವಸೆಯೆಲ್ಲಾ ಬತ್ತಿ ಹೋದಂತಾಗಿ ಅದೇನೋ ಆತಂಕ ಶುರುವಾಗಿತ್ತು .  ಸಣ್ಣಗೆ ಬೆವರುತ್ತಾ, ಕಂಪಿಸುವ ಹೃದಯದೊಡನೆ, ನಡುಗುತ್ತಿದ್ದ ಕಾಲುಗಳನ್ನು ಬಲವಂತವಾಗಿ ಎಳೆದುಕೊಂಡು, ನನಗೆ ನಾನೇ ಧೈರ್ಯ ಹೇಳಿಕೊಳ್ಳುತ್ತಾ ನಿಧಾನವಾಗಿ ಫಲಿತಾಂಶದ ಪಟ್ಟಿ ಹಾಕಿದ್ದ ಫಲಕದೆಡೆಗೆ ನಡೆದೆ.  ಅದಾಗಲೇ ಬೆಳಿಗ್ಗೆಯೇ ಎಲ್ಲರೂ ಬಂದು ಫಲಿತಾಂಶ ನೋಡಿಕೊಂಡು ಹೋಗಿದ್ದುದರಿಂದ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಅಲ್ಲಿದ್ದರು. ಫಲಿತಾಂಶದ ಪಟ್ಟಿಯಲ್ಲಿ ಕೆಳಗಿನಿಂದ ನನ್ನ ನಂಬರ್ ಹುಡುಕಲಾರಂಭಿಸಿದೆ.  ಜಸ್ಟ್ ಪಾಸ್ ಆದವರ ಪಟ್ಟಿಯಲ್ಲಿ ನನ್ನ ನಂಬರ್ ಇರಲಿಲ್ಲ, ದ್ವಿತೀಯ ದರ್ಜೆಯಲ್ಲಿಯೂ ಇಲ್ಲ, ಮೇಲಕ್ಕೆ ಬಂದರೆ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಒಟ್ಟು ೧೫ ಜನರಲ್ಲಿ ೭ನೆಯದು ನನ್ನ ನಂಬರ್ ಆಗಿತ್ತು!  ನಂಬಲಾಗದೆ ಮತ್ತೊಮ್ಮೆ, ಮಗದೊಮ್ಮೆ ಆ ನಂಬರ್ ಓದಿ ಧೃಡಪಡಿಸಿಕೊಂಡೆ !  ಹೌದು, ಅದು ನನ್ನದೇ ಆಗಿತ್ತು, ನನ್ನ ಭರವಸೆ, ಆತ್ಮವಿಶ್ವಾಸ, ನಂಬಿಕೆ ಎಲ್ಲವೂ ನಿಜವಾಗಿತ್ತು!  ನನ್ನ ಜೀವನದ ಬಹು ಮುಖ್ಯವಾದ ಮೊದಲನೆಯ ಪರೀಕ್ಷೆಯನ್ನು ನಾನು ಪ್ರಥಮದರ್ಜೆಯಲ್ಲಿಯೇ ಪಾಸು ಮಾಡಿದ್ದೆ.

ಆಗ ಅಲ್ಲಿಗೆ ಬಂದ ಗುಂಡಣ್ಣ ಮಾಸ್ತರು "ಲೇ ಮಂಜಾ, ಯಾಕೋ ಬೆಳಿಗ್ಗೆಯಿಂದ ಬಂದಿಲ್ಲ, ದಿನಾ ಶಾಲೆಗೆ ಲೇಟಾಗಿ ಬಂದಂಗೆ, ಫಲಿತಾಂಶ ನೋಡೋದಿಕ್ಕೂ ಲೇಟಾಗಿ ಬಂದಿದ್ದೀಯಲ್ಲೋ, ನೋಡಿದೆಯಾ, ನೀನು ಯಾವಾಗಲೂ ಹೇಳ್ತಾ ಇದ್ದಂಗೆ ಪ್ರಥಮ ಶ್ರೇಣಿಯಲ್ಲೇ ಪಾಸಾಗಿದೀಯಾ, ವೆರಿ ಗುಡ್, ಮುಂದೆ ಏನು ಮಾಡ್ಬೇಕೂಂತಿದೀಯಾ" ಅಂದವರಿಗೆ ಏನು ಹೇಳಬೇಕೋ ತಿಳಿಯದಂತಾಗಿ ಸುಮ್ಮನೆ ನಿಂತಿದ್ದೆ.  ನನ್ನ ಹೆಗಲ ಮೇಲೆ ಕೈ ಹಾಕಿ ಅತ್ಮೀಯವಾಗಿ ಅಪ್ಪಿಕೊಂಡ ಅವರು ನನ್ನನ್ನು ಮುಖ್ಯೋಪಾಧ್ಯಾಯರ ಕೊಠಡಿಗೆ ಕರೆದುಕೊಂಡು ಹೋದರು.  ಶ್ರೀ ಮಹಲಿಂಗಯ್ಯನವರು, "ಏನೋ ಲಂಬೂ, ನೀನು ಅಷ್ಟೊಂದು ಸಿನಿಮಾಗಳನ್ನು ನೋಡಿ, ಶಾಲೆಗೆ ಚಕ್ಕರ್ ಹಾಕಿ ತರಲೆ ಕೆಲಸ ಮಾಡಿದ್ರೂ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿರೋದು ನನಗೆ ತುಂಬಾ ಖುಷಿಯಾಗಿದೆ ಕಣೋ, ಮುಂದೆ ಚೆನ್ನಾಗಿ ಓದಿ ಬುದ್ಧಿವಂತನಾಗು" ಎಂದು ಹಾರೈಸಿ ನನ್ನ ಅಂಕಪಟ್ಟಿಯನ್ನು ಕೈಗಿತ್ತರು.  ೬೦೦ ಅಂಕಗಳಿಗೆ ಒಟ್ಟು ೩೭೫ ಅಂಕಗಳನ್ನು ಪಡೆದಿದ್ದೆ, ನಾನು ಪ್ರಶ್ನೆಪತ್ರಿಕೆಗಳಲ್ಲಿ ಬರೆದಿಟ್ಟು ಎಲ್ಲರ ಮುಂದು ದೌಲು ಹೊಡೆಯುತ್ತಿದ್ದುದು ೩೮೭ ಅಂಕಗಳು ಸಿಗುತ್ತವೆಂದು, ಅದಕ್ಕಿಂತ ಕೇವಲ ೧೨ ಅಂಕಗಳು ಮಾತ್ರ ಕಡಿಮೆ ಬಂದಿದ್ದವು!  ಸಂತೋಷದಿಂದ ನನ್ನ ಗಂಟಲುಬ್ಬಿ ಬಂದು ಕಣ್ಣಾಲಿಗಳು ತುಂಬಿ ಹೋಗಿದ್ದವು.  ಎಲ್ಲ ಉಪಾಧ್ಯಾಯರಿಗೂ ವಂದಿಸಿ ಅಲ್ಲಿಂದ ಹೊರಬಂದವನು ಸೀದಾ ಅಪ್ಪನ ಹೋಟೆಲ್ ಬಳಿಗೆ ಬಂದೆ.  ವ್ಯಾಪಾರದಲ್ಲಿ ನಿರತರಾಗಿದ್ದ ಅಪ್ಪ ನನ್ನನ್ನು ನೋಡಿಯೂ ನೋಡದಂತೆ ನಟಿಸುತ್ತಿದ್ದರು.  ಮೂಲ ಅಂಕಪಟ್ಟಿಯನ್ನು ಅಪ್ಪನ ಕೈಗೆ ಕೊಟ್ಟರೆ ಹರಿದು ಬಿಸಾಡಬಹುದೆನ್ನುವ ಭಯದಲ್ಲಿ ಒಂದು ಜೆರಾಕ್ಸ್ ಮಾಡಿಸಿಕೊಂಡು ಬಂದಿದ್ದ ಪ್ರತಿಯನ್ನು ಸೀದಾ ಅಪ್ಪನ ಕೈಗಿತ್ತೆ!

"ಅಂದು ನಾನು ಹೇಳಿದರೆ ನೀನು ನಂಬಲಿಲ್ಲ, ನೋಡು ಇಂದು ನಾನು ಪ್ರಥಮದರ್ಜೆಯಲ್ಲಿಯೇ ಪಾಸ್ ಮಾಡಿದ್ದೇನೆ" ಎಂದವನನ್ನು ಆಪಾದಮಸ್ತಕವಾಗಿ ಒಮ್ಮೆ ನೋಡಿದ ಅಪ್ಪ, ಮತ್ತೊಮ್ಮೆ ನನ್ನ ಅಂಕಪಟ್ಟಿಯನ್ನು ನೋಡಿ ಒಮ್ಮೆಲೇ ಭಾವುಕರಾಗಿ ಬಿಟ್ಟಿದ್ದರು!  ನಿನ್ನ ಮಾತು ಕೇಳಲಿಲ್ಲ ಕಣೋ, ತಪ್ಪು ಮಾಡಿಬಿಟ್ಟೆ! ಎಂದು ನನ್ನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದರು.  ಅಲ್ಲೇ ಇದ್ದ ಸಕ್ಕರೆ ಡಬ್ಬದಿಂದ ಒಂದು ಹಿಡಿ ಸಕ್ಕರೆ ತೆಗೆದು ಬಾಯಿಗೆ ಹಾಕಿ ಸಂಭ್ರಮಿಸಿದ್ದರು.  ಹೋಗು, ಮನೆಗೆ ಹೋಗಿ ನಿಮ್ಮ ಅಮ್ಮನಿಗೆ ತೋರಿಸು, ಅವಳಿಗೂ ಖುಷಿಯಾಗುತ್ತದೆ ಅಂದಿದ್ದರು.  ಅಲ್ಲಿಂದ ಸೀದಾ ಮನೆಗೆ ಹೋದವನು ಅಮ್ಮನಿಗೆ ಅಂಕಪಟ್ಟಿ ತೋರಿಸಿ ಕಾಲಿಗೆ ಬಿದ್ದಿದ್ದೆ!  ನಾನು ಪ್ರಥಮದರ್ಜೆಯಲ್ಲಿ ಪಾಸಾದ ಖುಷಿಗೋ, ಅಥವಾ ನಾನು ಅನುಭವಿಸಿದ ತೊಂದರೆಗಳನ್ನು ನೆನೆದೋ, ಆ ನನ್ನ ತಾಯಿಯ ಕಣ್ತುಂಬಾ ನೀರು ಧಾರೆಯಾಗಿ ಹರಿದು ಹೋಗಿತ್ತು!  "ದೇವರು ನಿನಗೆ ಒಳ್ಳೆಯದು ಮಾಡಲಪ್ಪಾ, ಚೆನ್ನಾಗಿ ಓದಿ ಮುಂದೆ ಒಳ್ಳೆಯವನಾಗಿ ಬದುಕು" ಎಂದು ಗದ್ಗದಿತಳಾಗಿ ತಲೆಯ ಮೇಲೆ ಕೈಯಿಟ್ಟು ಮನಃಪೂರ್ವಕ ಹರಸಿದ್ದಳಂದು ಆ ನನ್ನಮ್ಮ!  ಅಂದು ನಾನು ಅಂದುಕೊಂಡಿದ್ದನ್ನು ಸಾಧಿಸುವ ಶಕ್ತಿ ಕೊಟ್ಟ ಆ ದೇವರು, ಮುಂದೆ  ನನ್ನನ್ನು ಅಪ್ಪ ಅಮ್ಮನೊಟ್ಟಿಗೆ ಇದ್ದು ಓದುವ ಭಾಗ್ಯವನ್ನು ಮಾತ್ರ ಕರುಣಿಸಿರಲಿಲ್ಲ!  ಆ ಕಥೆ ಮುಂದಿನ ಭಾಗದಲ್ಲಿ ----

Wednesday, April 30, 2014

ನೆರಳು:



ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ, 
ಪರಾಕು ಹೇಳಲು ಬೇರೆ ಯಾರೂ ಇಲ್ಲವಿಲ್ಲಿ!

ಎಲ್ಲಿ ಹೋದರೆ ಅಲ್ಲಿ, ಸೋತಲ್ಲಿ, ಗೆದ್ದಲ್ಲಿ 
ಬಿದ್ದಲ್ಲಿ, ಎದ್ದಲ್ಲಿ, ಕುಡಿದು ತೂರಾಡಿದಲ್ಲಿ!

ಭರವಸೆಯ ಸೆಲೆ ಬತ್ತಿ ಹತಾಶನಾಗಿದ್ದಲ್ಲಿ,
ಇನ್ನು ಬದುಕು ಕೊನೆಯಾಯಿತೆನ್ನುವಲ್ಲಿ!

ಬಿದ್ದ ಏಟಿಗೆ ಹೃದಯ ಒಡೆದು ಹೋದಲ್ಲಿ, 
ಕಂಬನಿ ಧಾರೆಯಾಗಿ ಹರಿದು ಹೋದಲ್ಲಿ 

ಕೊನೆಗೊಮ್ಮೆ ಎಲ್ಲ ಗೆದ್ದು ಖುಷಿಯಾದಲ್ಲಿ,
ಜಗವ ಗೆದ್ದೆನೆಂದು ಬೀಗುವ ಸಮಯದಲ್ಲಿ!

ಸಾಗರವ ದಾಟಿಯೂ ಎಲ್ಲಿ ಹೋದರೆ ಅಲ್ಲಿ, 
ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ!

ನಾನಿರುವೆ ಗೆಳೆಯ ಭಯ ಬಿಡು ಬಾಳಲ್ಲಿ 
ನೀನೆಲ್ಲಿ ಹೋದರೂ ನಾನಿರುವೆ ಎನ್ನುತಲಿ!